Skip to main content

ಬೆಳಿಗ್ಗೆ ಎದ್ದಾಗ ಕೈಯಲ್ಲಿ ಹಿಡಿಯುವ ಹಲ್ಲುಜ್ಜುವ ಬ್ರಷ್ ನಿಂದ ಹಿಡಿದು, ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಳ್ಳುವ ನೈಟ್ ಕ್ರೀಂ ಡಬ್ಬಿವರೆಗೂ ಈ ಪ್ಲಾಸ್ಟಿಕ್ ಬಳಸುತ್ತೇವೆ. ಇನ್ನು ಮಾರುಕಟ್ಟೆಗೆ ಹೊರಟರೆ ಮನೆಯಿಂದ ಕೈ ಚೀಲ ಹಿಡಿದುಕೊಂಡು ಹೋಗುವುದಕ್ಕೆ ಮುಜುಗರ ಪಡುವ ನಾವು ಅಲ್ಲಿ ಶಾಪ್ ನಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಯಾವುದೇ ಹಿಂಜರಿಕೆ ಇಲ್ಲದೇ ಕೈಯಲ್ಲಿ ಹಿಡಿದುಕೊಂಡು ಬರುತ್ತೇವೆ. ಒಂದು ಪ್ಯಾಕ್  ಹಾಲು ತರುವುದಕ್ಕೂ ನಮಗೆ ಪ್ಲಾಸ್ಟಿಕ್ ಚೀಲ ಬೇಕು. ಹಣ್ಣು, ತರಕಾರಿ, ಮನೆಗೆ ಬೇಕಾದ ಸಾಮಾನು ಹೀಗೆ ಎಲ್ಲವನ್ನೂ ಈ ಪ್ಲಾಸ್ಟಿಕ್ ಆವರಿಸಿಕೊಂಡಿದೆ.

ಇನ್ನು ಮನೆಗೆ ತಂದ ಈ ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಬಿಸಾಡುವುದು ಕೂಡ ಒಂದು ಹೀನ ಕೆಲಸ ಎನ್ನಬಹುದು. ಯಾಕೆಂದರೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಈ ರೀತಿಯಾಗಿ ಬಿಸಾಡುವ ಎಷ್ಟೋ ಪ್ಲಾಸ್ಟಿಕ್ ಗಳು ಪ್ರಾಣಿಗಳ ದೇಹ ಸೇರಿ ಅವುಗಳ ಪ್ರಾಣಕ್ಕೆ ಕುತ್ತು ತಂದ ಘಟನೆಗಳು ಆಗಿವೆ. ಹೀಗೆ ಸರ್ವಾಂತಯಾಮಿ ಆಗಿ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿರುವ ಪ್ಲಾಸ್ಟಿಕ್ ಬಳಕೆಗೆ ಈಗ ಸರ್ಕಾರ ನಿಷೇಧ ಹೇರಿದೆ. ಅಂದರೆ ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ಗೆ ಸರ್ಕಾರ ನಿಷೇಧ ಹೇರಿದೆ. 

ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಏಕಬಳಕೆ (ಸಿಂಗಲ್ ಯೂಸ್) ಅಂದರೆ ಒಂದು ಬಾರಿ ಬಳಕೆ ಮಾಡುವಂತಹ ಪ್ಲಾಸ್ಟಿಕ್ ಅನ್ನು ದೇಶಾದ್ಯಂತ ನಿಷೇಧ ಮಾಡಲಾಗಿದೆ. ಹಾಗೇ ಈ ಪ್ಲಾಸ್ಟಿಕ್ ನ ಆಮದು, ವಿತರಣೆ, ಹಾಗೂ ಮಾರಾಟ, ಬಳಕೆ ಇವೆಲ್ಲದರ ಮೇಲೂ ನಿಷೇಧ ಹೇರಲಾಗಿದೆ. ಹಾಗಾಗಿ ಇನ್ನು ಮುಂದೆ ಹಾಲು, ಮೊಸರು ತರಲು ಅಂಗಡಿಗೆ ಹೋಗುವಾಗ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕೇಳಬೇಡಿ!

ಪ್ಲಾಸ್ಟಿಕ್ ನಿಂದ ಉಂಟಾಗುವ ಕಸ ಹಾಗೂ ಸರಿಯಾದ ರೀತಿಯಲ್ಲಿ ನಿರ್ವಹಣೆಯಿಲ್ಲದ ಈ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕರ್ನಾಟಕ ಸರ್ಕಾರ 2016ರಿಂದಲೇ ಈ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಇದೀಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದ ಈ ಆದೇಶವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಗಡಿ ಪ್ರದೇಶದಲ್ಲಿ ನಿರ್ಬಂಧಗಳನ್ನು ಅನುಷ್ಠಾನಗೊಳಿಸಲು ಇದು ಇಂಬು ನೀಡುವಂತಾಗಿದೆ.

ಯಾವುದೆಲ್ಲರ ಮೇಲೆ ನಿಷೇಧ?

ಮನೆಯಲ್ಲಿ ದಿನಾ ಯಾವುದಾದರೊಂದು ಕಾರಣಕ್ಕೆ ಪ್ಲಾಸ್ಟಿಕ್ ಅನ್ನು ಬಳಸಿಯೇ ಇರುತ್ತೇವೆ. ಉಪಯೋಗಿಸಿದ ನಂತರ ಅವುಗಳನ್ನು ಸರಿಯಾಗಿ ನಿರ್ವಹಿಸದೇ ಅದನ್ನು ಎಲ್ಲೆಂದರಲ್ಲಿ ಬಿಸಾಡಿಬಿಡುತ್ತೇವೆ. ಇದರಿಂದ ಪರಿಸರಕ್ಕೂ ಹಾನಿ ಹಾಗೇ ನಮ್ಮ ಆರೋಗ್ಯಕ್ಕೂ ವಿಷಕಾರಿ. ಚಾಕೋಲೇಟಿನ ಕಡ್ಡಿಗಳು, ಪ್ಲಾಸ್ಟಿಕ್ ಕಪ್. ಪ್ಲಾಸ್ಟಿಕ್ ಪ್ಯಾಕಿಂಗ್ ವಸ್ತು, ಥರ್ಮಾ ಕೋಲ್, ಐಸ್ ಕ್ರೀಂ ಕಡ್ಡಿ, ಸಿಹಿ ತಿನಿಸುಗಳ ಬಾಕ್ಸ್,  ಆಮಂತ್ರಣ ಪತ್ರಿಕೆ, ಸಿಗರೇಟು ಪ್ಯಾಕ್ ಮೇಲೆ ಉಪಯೋಗಿಸುವ ತೆಳುವಾದ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಚಮಚ, ಧ್ವಜ, ಬಲೂನು, ಈಯರ್ ಬಡ್ಸ್, ಪ್ಲಾಸ್ಟಿಕ್ ಚಾಕು, ಸ್ಟ್ರಾ, 100 ಮೈಕ್ರಾನ್ ಗಳಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್ ಇವುಗಳ ಮೇಲೆ ನಿಷೇಧ ಹೇರಲಾಗಿದೆ.

ಪ್ಲಾಸ್ಟಿಕ್ ಗೆ ಪರ್ಯಾಯವೇನು?

ನಮ್ಮ ಬದುಕಿನ ತುಂಬ ಹಾಸುಹೊಕ್ಕಾಗಿರುವ ಈ ಪ್ಲಾಸ್ಟಿಕ್ ಇಲ್ಲದೇ ಜೀವನ ನಡೆಸುವುದು ಕೂಡ ಕೆಲವರಿಗೆ ದುಸ್ತರ ಅನಿಸಬಹುದು. ಅಷ್ಟರ ಮಟ್ಟಿಗೆ ನಾವು ಈ ಪ್ಲಾಸ್ಟಿಕ್ ಗೆ ಜೋತುಬಿದ್ದಿದ್ದೇವೆ ಎಂದರೆ ತಪ್ಪಾಗಲಾರದು! ಇವುಗಳ ಬಳಕೆಯ ಬದಲು ಇನ್ಯಾವುದನ್ನು ಉಪಯೋಗಿಸಬಹುದು ಹೇಗೆ ಉಪಯೋಗಿಸಬಹುದು ಎಂಬ ಪ್ರಶ್ನೆಗಳು ಕೆಲವರನ್ನು ಕಾಡುತ್ತಿರುತ್ತದೆ. ಎಲ್ಲದಕ್ಕೂ ಒಂದು ಪರ್ಯಾಯ ವ್ಯವಸ್ಥೆ ಇದ್ದೇ ಇರುತ್ತದೆ. ಅದನ್ನು ನಾವು ಹುಡುಕಬೇಕು ಅಷ್ಟೇ. ಇಲ್ಲೊಂದಿಷ್ಟು ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಬಳಸಬಹುದಾದ ವಸ್ತುಗಳಿವೆ ನೋಡಿ.

ಐಸ್ ಕ್ರೀಂಗಳಿಗೆ ಪ್ಲಾಸ್ಟಿಕ್ ಚಮಚದ ಬದಲು ಮರದ ತುಂಡಿನಿಂದ ತಯಾರಾಗುವ ಚಮಚ ಬಳಸಬಹುದು. ಹಾಗೇ ಇನ್ನು ಪ್ಲಾಸ್ಟಿಕ್ ಪ್ಲೇಟ್, ಲೋಟ, ಡಬ್ಬ, ಚಾಕುಗಳಿಗೆ ಬಿದಿರಿನಿಂದ, ಅಡಿಕೆಯಿಂದ ಹಾಗೂ ಕೆಲವು ಮರದ ಎಲೆಗಳಿಂದ ತಯಾರಿಸಲಾಗುವ ಪ್ಲೇಟ್, ಲೋಟಗಳನ್ನು ಬಳಸಬಹುದು. ಹಾಗೇ ಮಣ್ಣು/ಸ್ಟೀಲ್ ನ ಬಾಟಲ್, ಲೋಟಗಳ ಬಳಕೆ ಮಾಡಬಹುದು. ಈಗ ಬಟ್ಟೆಯಿಂದ ತಯಾರಿಸಲಾಗುವ ಚೀಲ ಹಾಗೇ ಕೆಲವು ಸಾವಯವ ವಸ್ತುಗಳಿಂದ ತಯಾರು ಮಾಡಿದಂತಹ ಕೈಚೀಲಗಳು ಲಭ್ಯವಿದೆ. ಹಾಗಾಗಿ ಮನೆಯಿಂದ ಹೊರಗೆ ಹೋಗುವಾಗ ಒಂದು ಬಟ್ಟೆಯ ಚೀಲವನ್ನು ಯಾವಾಗಲೂ ನಿಮ್ಮ ಗಾಡಿಯ ಒಳಗೆ ಇಟ್ಟುಕೊಳ್ಳಿ. ಇದರಿಂದ ಕೂಡ ಈ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಅನುಕೂಲವಾಗುತ್ತದೆ. 

ಪ್ಲಾಸ್ಟಿಕ್ ನಿಂದ ಉಂಟಾಗುವ ತೊಂದರೆಗಳೇನು?

ಕೈಗೆಟುಕುವ ದರದಲ್ಲಿ ಸಿಗುವ ಈ ಪ್ಲಾಸ್ಟಿಕ್ ಉತ್ಪನ್ನದ ಮೇಲೆ ಮನುಷ್ಯ ತುಂಬಾನೇ ಅವಲಂಬಿತನಾಗಿದ್ದೇನೆ. ಇದರಿಂದ ತಯಾರಾಗುವ ಅನೇಕ ಉತ್ಪನ್ನಗಳು, ಮನುಷ್ಯ, ಪರಿಸರ, ಪ್ರಾಣಿ ಹೀಗೆ ಎಲ್ಲದರ ಮೇಲೂ ತನ್ನ ವಿಷ ವರ್ತುಲವನ್ನು ಹರಡಿದೆ. ಪ್ಲಾಸ್ಟಿಕ್ ತಯಾರಿಕೆಯಿಂದ ಹಿಡಿದು ಅದು ತ್ಯಾಜ್ಯವಾಗುವವರೆಗೂ ಇದರ ದುಷ್ಪರಿಣಾಮವಿದೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ ರಾಸಾಯನಿಕಗಳು ಮನುಷ್ಯನಲ್ಲಿ ಅನೇಕ  ಬಗೆಯ ಕ್ಯಾನ್ಸರ್ ಹರಡಲು ಕಾರಣವಾಗಬಹುದು. ಚರ್ಮ, ನರಮಂಡಲ, ಉಸಿರಾಟ ಕ್ರೀಯೆಯ ಮೇಲೂ ಇದರ ಪರಿಣಾಮ ಬೀರಲಿದೆ. ಹಾಗೇ ಮಕ್ಕಳ ದೇಹಕ್ಕೆ ಈ ಪ್ಲಾಸ್ಟಿಕ್ ಎಂಬ ವಿಷ ಸೇರಿದರೆ ಅವರ ಬೆಳವಣಿಗೆ ಕುಂಠಿತವಾಗಬಹುದು ಜೊತೆಗೆ ನಾನಾ ಬಗೆಯ ರೋಗಗಳನ್ನು ಉಂಟು ಮಾಡಬಹುದು. ಮಣ್ಣಿನಲ್ಲಿ, ನೀರಿನಲ್ಲಿ ಕರಗದ ಈ ಪ್ಲಾಸ್ಟಿಕ್ ಗಳು ಪರಿಸರಕ್ಕೂ ಹಾನಿ ಹಾಗೇ ಇವುಗಳನ್ನು ಗೊತ್ತಿಲ್ಲದೇ ಸೇವಿಸಿದ ಪ್ರಾಣಿ, ಪಕ್ಷಿಗಳ ಜೀವಕ್ಕೂ ಮಾರಕವಾಗಿದೆ. ಮನೆಯಲ್ಲಿ ಉಪ್ಪಿನ ಡಬ್ಬಿಯಿಂದ ಹಿಡಿದು ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್ ವರೆಗೂ ನಾವು ಪ್ಲಾಸ್ಟಿಕ್ ಉತ್ಪನ್ನಗಳಿಗೆ ಮಾರು ಹೋಗಿದ್ದೇವೆ. ಬಣ್ಣ ಬಣ್ಣದ ಈ ಪ್ಲಾಸ್ಟಿಕ್ ಉತ್ಪನ್ನಗಳು ಬದುಕಿನ ಬಣ್ಣವನ್ನು ಕೆಡಿಸದಿರಲಿ!